ಅಫ್ರೀದಿಗಳು	 	
	ಭಾರತದ ವಾಯವ್ಯ ಪ್ರದೇಶದ (ಪಶ್ಚಿಮ ಪಾಕಿಸ್ತಾನದ) ಬೆಟ್ಟಗುಡ್ಡಗಳಲ್ಲಿ ವಾಸಿಸುವ ಅತ್ಯಂತ ಬಲಿಷ್ಠ ಪಠಾಣರು. ಖೈಬರ್ ಕಣಿವೆಯ ದಕ್ಷಿಣದಲ್ಲಿರುವ ಸಫೇದ್ ಕೋಹ್ ಬೆಟ್ಟಗಳೇ ಇವರ ವಾಸಸ್ಥಳ. ಮುಖಭಾವಗಳಲ್ಲಿ ಯೆಹೂದ್ಯರ ಹೋಲಿಕೆಯಿದ್ದರೂ ಇವರ ಎರಡು ಸಾವಿರ ವರ್ಷಗಳ ಇತಿಹಾಸ ಗೊತ್ತಿಲ್ಲ. ಅಕ್ಬರನ ಕಾಲದಿಂದ ಈ ಜನ ಮೊಗಲ್ ಸೈನ್ಯದಲ್ಲಿ ಸೇರಿದ್ದರು. ಖೈಬರ್ ಕಣಿವೆಯನ್ನು ರಕ್ಷಿಸುವುದಕ್ಕಾಗಿ ಮೊಗಲ್ ಚಕ್ರವರ್ತಿಗಳು ಇವರಿಗೆ ಹಣ ಕೊಡುತ್ತಿದ್ದರು. ದಾಳಿಮಾಡಿದ ನಾದಿರ್ ಷಹನನ್ನು ಇವರು ತಡೆಯದೇ ಹೋದರು. ಅಹಮದ್ ಷಾ ಅಬ್ದಾಲಿ ಮತ್ತು ಸಿಕ್ಕರ ಆಳ್ವಿಕೆಯ ಕಾಲದಲ್ಲಿ ಕಣಿವೆಯ ವ್ಯಾಪಾರದ ಮೇಲೆ ಸುಂಕವನ್ನು ವಸೂಲು ಮಾಡುವ ಕೆಲಸ ಇವರದ್ದಾಗಿತ್ತು. ಬ್ರಿಟಿಷರು ಕಾಲದಲ್ಲಿ ಇವರು ಬ್ರಿಟಷ್ ಸೈನ್ಯಕ್ಕೆ ಸೇರಿ ಸೇವೆ ಸಲ್ಲಿಸಿದರು. ಈ ಜನರಲ್ಲಿ ಪ್ರಜಾ ಪ್ರಭುತ್ವ ಜಾರಿಯಲ್ಲಿದ್ದರೂ ಗುಂಪಿನ ಮುಖಂಡರಿಗೆ ಹೆಚ್ಚಿನ ಅಧಿಕಾರ ಇರುವುದಿಲ್ಲ. ಇವರು ಸ್ವಭಾವತಃ ಧೈರ್ಯಶಾಲಿಗಲು, ದೃಢಾಂಗರು, ಕ್ರೂರಿಗಳು. ನಂಬಿಕೆಗೆ ಅರ್ಹರಲ್ಲವಾದುದರಿಂದ ಇವರ ಒಪ್ಪಂದಗಳಿಗೆ ಮಾನ್ಯತೆ ಇಲ್ಲ.		

(ಎಚ್.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ